ಬೆಲೆನಿಯಂತ್ರಣ
	ಅಭಿವೃದ್ಧಿ ಮತ್ತು ಬಳಕೆ ದೃಷ್ಟಿಯಿಂದ ಅವಶ್ಯಕ ಸರಕುಗಳ ಬೆಲೆಗಳನ್ನು ನಿಯಮಾನುಸಾರ ನಿರ್ಧರಿಸುವ ಸರ್ಕಾರದ ಒಂದು ಮಹತ್ತ್ವದ ಕ್ರಮ (ಪ್ರೈಸ್ ಕಂಟ್ರೋಲ್). ಸರ್ಕಾರ ಸರಕುಗಳ ಪ್ರಚಲಿತ ಬೆಲೆಗಳನ್ನು ಹೆಚ್ಚಸಬಹುದು ಇಲ್ಲವೆ ಕಡಿಮೆ ಮಾಡಬಹುದು. ಅದು ಜನ ಸಾಮಾನ್ಯರ ಹಿತಕ್ಕಾಗಿ ಖಾಸಗಿ ವಲಯದ ಏಕಸ್ವಾಮ್ಯ ಉದ್ಯಮಗಳಲ್ಲಿ ಸರಕುಗಳ ಬೆಲೆಗಳನ್ನು ನಿರ್ಧರಿಸುತ್ತದೆ. ಮುಕ್ತ ಅರ್ಥ ವ್ಯವಸ್ಥೆಯಲ್ಲಿ ಗ್ರಾಹಕರ ಮತ್ತು ಮಾರಾಟಗಾರರ ಸ್ಪರ್ಧೆಯ ಮೂಲಕ ಬೆಲೆಗಳು ನಿರ್ಧರಿಸಲ್ಪಡುತ್ತದೆ. ಈ ವ್ಯವಸ್ಥೆಯಲ್ಲಿ ಬೇಡಿಕೆ ಹಾಗೂ ಉತ್ಪಾದನೆಯ ಗಾತ್ರ ಬೆಲೆಗಳನ್ನೂ ಅವಲಂಬಿಸಿದೆ. ಸ್ಪರ್ಧಾತ್ಮಕ ಪೇಟೆಯಲ್ಲಿ ಕಂಡುಬರುವ ಬೆಲೆಗಳ ಹೊಯ್ದಾಟಕ್ಕೆ ನಿಯಂತ್ರಣದಿಂದ ತಡೆ ಉಂಟಾಗುತ್ತದೆ. ಯುದ್ಧ ಹಾಗೂ ಅಭಿವೃದ್ಧಿಕಾಲದಲ್ಲಿ ಸರ್ಕಾರ ರಾಷ್ಟ್ರದ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ವರಮಾನ ಹಾಗೂ ಸಂಪತ್ತು ಆಧಿಕಗೊಳಿಸಲು ನಿಯಂತ್ರಣ ಧೋರಣೆಯನ್ನು ರೂಪಿಸುತ್ತದೆ. ಎರಡನೆಯ ಮಹಾಯುದ್ಧದ ಕಾಲದಲ್ಲಿ ಜನಸಂಖ್ಯೆಯ ಅಧಿಕ ಭಾಗ ಬೆಲೆಗಳಲ್ಲಿ ಹೆಚ್ಚಳ ಹಾಗೂ ಅವಶ್ಯಕ ವಸ್ತುಗಳ ಕೊರತೆಯಿಂದಾಗಿ ಬಹಳ ಕಷ್ಟಕ್ಕೀಡಾಯಿತು. ಭಾರತದಲ್ಲಿ ಕೇಂದ್ರ ಸರ್ಕಾರ ಉತ್ಪಾದನೆ ಹಾಗೂ ಸಗಟು ವ್ಯಾಪಾರದ ಮಟ್ಟದಲ್ಲಿ ಬೆಲೆಗಳನ್ನು ನಿಯಂತ್ರಿಸಿತು. ಪ್ರಾಂತೀಯ ಸರ್ಕಾರಗಳು ಕೂಡ ಕಿರುಕುಳ ಪೇಟೆಯಲ್ಲಿಯ ಆವಶ್ಯಕ ಸರಕುಗಳ ಬೆಲೆಗಳನ್ನು ನಿಯಂತ್ರಿಸುವಂತೆ ಆದೇಶ ನೀಡಲಾಯಿತು. ಬೆಲೆ ನಿಯಂತ್ರಣ ಕುರಿತು ಕಾಲಕಾಲಕ್ಕೆ ಕೇಂದ್ರ ಸರ್ಕಾರ ಪ್ರಾಂತೀಯ ಸರ್ಕಾರಗಳ ಸಹಕಾರದಿಂದ ಹೊಸ ಕ್ರಮಗಳನ್ನು ಕೈಗೊಂಡಿತು. ಭಾರತದ ರಕ್ಷಣಾ ಅಧಿನಿಯಮದ ಅನ್ವಯ ಮಾರುಕಟ್ಟೆಯಲ್ಲಿ ಪ್ರಚಲಿತ ಬೆಲೆಗಳ ಪಟ್ಟಿಯನ್ನು ಪ್ರಸಿದ್ಧಿ ಪಡಿಸುವಂತೆ ಆದೇಶ ನೀಡಲಾಯಿತು. ಅಕ್ರಮ ರೀತಿಯಲ್ಲಿ ಧಾನ್ಯ ದಾಸ್ತಾನು, ಸರಕಿನ ಮಾರಾಟ ಮಾಡುವವರನ್ನು ಕಠಿಣ ಶಿಕ್ಷೆಗೆÉ ಒಳಪಡಿಸಲಾಯಿತು. ಬಳಕೆ ಸರಕುಗಳ ಸರಿಯಾದ ರೀತಿಯಲ್ಲಿ ವಿತರಣೆಯಾಗಬೇಕೆಂದು ನ್ಯಾಯಬೆಲೆ ಅಂಗಡಿಗಳ ಮೂಲಕ ನಿರ್ಧರಿಸಿದ ಬೆಲೆಗೆ ಸರಕನ್ನು ಮಾರುವ ವ್ಯವಸ್ಥೆ ಮಾಡಲಾಯಿತು. 

	ಖಾಸಗಿ ವಲಯದಲ್ಲಿ ಉತ್ಪಾದಕರ ಹಾಗೂ ವ್ಯಾಪಾರಿಗಳ ಸಂಸ್ಥೆಗಳು ಪರಸ್ಪರ ವಿಚಾರ ವಿನಿಮಯದ ಮೂಲಕ ಸರಕುಗಳ ಬೆಲೆಗಳನ್ನು ನಿರ್ಧರಿಸುತ್ತವೆ. ಇದು ಸಾಮಾನ್ಯವಾಗಿ ಅಧಿಕ ಲಾಭಗಳಿಸುವುದಕ್ಕಾಗಿಯೇ ಹೊರತು ಜನ ಸಾಮಾನ್ಯರ ಹಿತಸಂವರ್ಧನೆಗಲ್ಲ. ಬೆಲೆಗಳನ್ನು ನಿಯಂತ್ರಿಸದೆ ಹೋದಲ್ಲಿ ಆರ್ಥಿಕ ಅಭಿವೃದ್ಧಿಗೆ ಬೇಕಾಗುವ ಸಂಪನ್ಮೂಲಗಳ ಸರಿಯಾದ ವಿತರಣೆ ಆಗುವುದಿಲ್ಲ. ಸರ್ಕಾರ ಅಲ್ಪಕಾಲೀನ ಹಾಗೂ ದೀರ್ಘಕಾಲೀನ ಆರ್ಥಿಕ ಅಭಿವೃದ್ಧಿಯ ದೃಷ್ಟಿಯಿಂದ ಬಳಕೆಯ ಮತ್ತು ಬಂಡವಾಳ ಸರಕುಗಳ ಸರಿಯಾದ ಬಳಕೆ ಆಗುವಂತೆ ನಿಯಂತ್ರಣ ಧೋರಣೆಯನ್ನು ಅನುಸರಿಸಲೇ ಬೇಕಾಗುತ್ತದೆ. ನಿಯಂತ್ರಣ ಧೋರಣೆಯ ಮೂಲಕ ಯಾವುದೇ ಸರಕನ್ನು ನಿರ್ದಿಷ್ಟ ಬೆಲೆಗೆ ಮಾರಬೇಕಾಗುವುದು. ಒಂದು ವೇಳೆ ಈ ನಿರ್ದಿಷ್ಟ ಬೆಲೆ ಸಾಮಾನ್ಯ ಬೆಲೆಗಿಂತ ಕಡಿಮೆ ಇದ್ದಲ್ಲಿ ಕಾಳಸಂತೆ ಅಸ್ತಿತ್ವದಲ್ಲಿ ಬರುವುದು. ಆದ್ದರಿಂದ ಸರ್ಕಾರ ಬೆಲೆಗಳ ನಿಯಂತ್ರಣ ಧೋರಣೆಯನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಆಡಳಿತಯಂತ್ರವನ್ನು ಬಿಗಿಗೊಳಿಸಬೇಕಾಗುವುದು. 

	ಒಂದು ಸರಕಿನ ಬೆಲೆ ನಿಯಂತ್ರಣ ಯಶಸ್ವಿಯಾಗಬೇಕಾದರೆ ಆ ಸರಕಿನ ಉತ್ಪಾದನೆಗಾಗಿ ಬಳಕೆಯಾಗುವ ಎಲ್ಲ ಉತ್ಪಾದಕ ಸಾಮಗ್ರಿಗಳನ್ನೂ ನಿಯಂತ್ರಿಸಬೇಕಾಗುವುದು. ಇಲ್ಲದಿದ್ದರೆ ಉತ್ಪಾದನ ವೆಚ್ಚ ಅಧಿಕವಾಗಿ ಉತ್ಪತ್ತಿ ಕಡಿಮೆ ಆಗುತ್ತದೆ. ಉದಾಹರಣೆಗೆ ರೇಲ್ವೆ ಎಂಜಿನ್ನುಗಳ ಉತ್ಪಾದನೆಗೆ ಉಕ್ಕು, ಕಲ್ಲಿದ್ದಲು ಮೊದಲಾದವುಗಳ ಬೆಲೆಗಳ ನಿಯಂತ್ರಣ ಅವಶ್ಯ. ನಿಯಂತ್ರಿತ ಸರಕುಗಳನ್ನು ನಿರ್ದಿಷ್ಟ ಬೆಲೆಗೆ ಮಾರುವಾಗ ವಿವಿಧ ಉದ್ಯಮಗಳಲ್ಲಿ ಪಕ್ಷಪಾತ ಅವಶ್ಯ. ಅಂದರೆ ನಿರ್ದಿಷ್ಟ ಬೆಲೆಯ ಮಟ್ಟ ಬಂಡವಾಳದ ಗಾತ್ರವನ್ನು ಅಧಿಕಗೊಳಿಸುವ ಉದ್ಯಮಗಳಲ್ಲಿ ಕಡಿಮೆ ಆಗಿದ್ದು, ಬಳಕೆಯ ಸರಕುಗಳನ್ನು ಉತ್ಪಾದಿಸುವ ಉದ್ಯಮಗಳಲ್ಲಿ ಸ್ವಲ್ಪ ಮಟ್ಟಿಗೆ ಹೆಚ್ಚಾಗಿರಬಹುದು. 

	ಬೆಲೆ ನಿಯಂತ್ರಣ ಸಾಮಾನ್ಯವಾಗಿ ದೇಶದಲ್ಲಿ ಅತಿ ಪ್ರಸರಣ ಹಾಗೂ ಆರ್ಥಿಕ ಮುಗ್ಗಟ್ಟುಗಳ ದುಷ್ಪರಿಣಾಮಗಳು ತಲೆದೋರಿದಾಗ ಹೆಚ್ಚಾಗಿ ಅವಶ್ಯವಾಗುತ್ತವೆ. ಬಂಡವಾಳವಾದಿ ಅರ್ಥವ್ಯವಸ್ಥೆಯಲ್ಲಿ ಉತ್ಪಾದನೆಯ ಗಾತ್ರ ಹೆಚ್ಚಿಸಲು ಯೋಗ್ಯವಾದ ಲಾಭ ಅವಶ್ಯ. ಆರ್ಥಿಕ ಮುಗ್ಗಟ್ಟಿನಿಂದಾಗಿ ಬೆಲೆಗಳು ತೀರ ಇಳಿದಾಗ ನಿರುದ್ಯೋಗ ಸಮಸ್ಯೆ ಬೆಳೆಯುತ್ತದೆ. ಬೆಲೆ ನಿಯಂತ್ರಣದ ಮೂಲಕ ಸರ್ಕಾರ ಯೋಗ್ಯ ಬೆಲೆಗಳನ್ನು ನಿರ್ದಿಷ್ಟ ಪಡಿಸಿ ಉದ್ಯಮಗಳ ಬೆಳೆವಣಿಗೆಗೆ ಪ್ರೋತ್ಸಾಹವಾಗುವಂತೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ದೇಶದಲ್ಲಿ ಅತಿ ಹಣದುಬ್ಬರ ಸಂಭವಿಸಿದಾಗ ಕಡಿಮೆ ವರಮಾನದ ಜನರು ಕಷ್ಟಕ್ಕೊಳಗಾಗುವರು. ವೇತನ ಮತ್ತು ಜೀವನ ವೆಚ್ಚಗಳಲ್ಲಿ ಹೊಂದಾವಣೆ ತರಲು ಸರ್ಕಾರ ಕಾರ್ಮಿಕರ ಹಿತ ದೃಷ್ಟಿಯಿಂದ ಅವಶ್ಯ ಸರಕುಗಳ ಬೆಲೆಗಳನ್ನು ನಿರ್ಧರಿಸ ಬೇಕಾಗುತ್ತದೆ. ಬೆಲೆ ನಿಯಂತ್ರಣಕ್ಕೆ ಬುನಾದಿಯಾಗಿ ಹಣದ ಚಲಾವಣೆಯನ್ನೂ ಉದರಿಯನ್ನೂ ನಿಯಂತ್ರಿಸಬೇಕಾಗುತ್ತದೆ. ಒಟ್ಟಿನಲ್ಲಿ ಬೆಲೆ ನಿಯಂತ್ರಣ ತನ್ನಷ್ಟಕ್ಕೆ ತಾನೇ ಫಲಕಾರಿಯಾಗದು. ಅದರ ಯಶಸ್ಸಿಗೆ ಬಿಗಿಯಾದ ಆಡಳಿತ ವ್ಯವಸ್ಥೆ, ಅರ್ಥ ವ್ಯವಸ್ಥೆಯ ಎಲ್ಲ ವಲಯಗಳ ಮೇಲೂ ಹಿಡಿತ ಅವಶ್ಯಕವಾಗುತ್ತವೆ. 
(ಎಸ್.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ